ಹ್ಯಾವೆಲ್ಮೋ
	ನೊಬೆಲ್ ಪ್ರಶಸ್ತಿ(1989) ಪಡೆದ ಪ್ರಸಿದ್ಧ ಅರ್ಥಶಾಸ್ತ್ರಜ್ಞ. ನಾರ್ವೆಯ ಶೆಡ್ಜಮೊ ಪಟ್ಟಣದಲ್ಲಿ 1911ರಲ್ಲಿ ಜನಿಸಿದ. ಆಸ್ಲೋ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ 1933ರಲ್ಲಿ ಪದವಿ ಪಡೆದ. ರ್ಯಾಗ್ನರ್ ಫ್ರಿಶ್ಚ್ ಇನ್‍ಸ್ಟಿಟ್ಯೂಟ್ ಆಫ್ ಎಕನಾಮಿಕ್ ರಿಸರ್ಚ್ ಸಂಸ್ಥೆಯಲ್ಲಿ ಸಂಶೋಧನ ವಿದ್ಯಾರ್ಥಿಯಾಗಿದ್ದು ಅನಂತರ 1947ರಲ್ಲಿ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ 1948ರಲ್ಲಿ ಆಸ್ಲೋ ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿದ ಪ್ರಾಧ್ಯಾಪಕನಾಗಿ ಸೇವೆಸಲ್ಲಿಸಿ 1979ರಲ್ಲಿ ನಿವೃತ್ತನಾದ.

	ಈತ ಮುಖ್ಯವಾಗಿ ಗಣಿತೀಯ ಅರ್ಥವಿಜ್ಞಾನಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾನೆ. 1943ರಲ್ಲಿ ಈತ ಪ್ರಕಟಿಸಿದ ಸ್ಟಾಟಿಸ್ಟಿಕಲ್ ಇಂಪ್ಲಿಕೇಷನ್ಸ್ ಆಫ್ ಎ ಸಿಸ್ಟಂ ಆಫ್ ಸೈಮಲ್‍ಟೇನಿಯಸ್ ಈಕ್ವೇಷನ್ಸ್ ಎಂಬ ಲೇಖನ ಇವನ ಮೊದಲ ಮುಖ್ಯ ಕೊಡುಗೆ. ಈ ಲೇಖನ ಅವರ ಎಕನಾಮೆಟ್ರಿಕಾ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಯಿತು. ಇದು ಈ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಿಗೆ ದಾರಿಮಾಡಿಕೊಟ್ಟಿತು. 1944ರಲ್ಲಿ ಪ್ರಕಟಗೊಂಡ ಇವನ ಮತ್ತೊಂದು ಲೇಖನ ದಿ ಪ್ರಾಬಬಲಿಟಿ ಅಪ್ರೋಚ್ ಇನ್ ಎಕನಾಮೆಟ್ರಿಕ್ಸ್ ಗಣಿತೀಯ ಅರ್ಥವಿಜ್ಞಾನದ ಸಂಶೋಧನೆಯಲ್ಲಿ ಅತ್ಯಂತ ಮುಖ್ಯವಾದ ಕೊಡುಗೆಯೆಂದು ಪರಿಗಣಿಸಲಾಯಿತು. ಗಣಿತೀಯ ಅರ್ಥವಿಜ್ಞಾನದಲ್ಲಿ `ಸಂಭವನೀಯ ಶಾಸ್ತ್ರವನ್ನು (ಪ್ರಾಬಬಲಿಟಿ ಥಿಯರಿ) ಹೇಗೆ ವ್ಯಾಪಕವಾಗಿ ಬಳಸಬಹುದು ಎಂಬುದನ್ನು ಈ ಲೇಖನ ದೃಢಪಡಿಸಿತು. ವಾಸ್ತವವಾಗಿ ಈ ಲೇಖನ ಹ್ಯಾವೆಲ್ಮೋಗೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟಿತು. ಮಲ್ಟಿಪ್ಲಯರ್ ಎಫೆಕ್ಟ್ಸ್ ಆಫ್ ಎ ಬ್ಯಾಲೆನ್ಸ್‍ಡ್ ಬಜೆಟ್ ಎಂಬ ಮತ್ತೊಂದು ಮಹತ್ತ್ವದ ಲೇಖನ 1945ರಲ್ಲಿ `ಎಕನಾಮೆಟ್ರಿಕಾದಲ್ಲಿ ಪ್ರಕಟವಾಯಿತು. ಇದರಲ್ಲಿ ಈತ ತೆರಿಗೆಗಳು ಮತ್ತು ಖರ್ಚಿನಲ್ಲಿ ಸಮತೋಲನ ಹೆಚ್ಚಳ ಉಂಟಾಗುವುದರಿಂದ ರಾಷ್ಟ್ರೀಯ ಉತ್ಪನ್ನದಲ್ಲಿ ಸಮಪ್ರಮಾಣದ ಹೆಚ್ಚಳ ಉಂಟಾಗುತ್ತದೆಂಬುದನ್ನು ಸಾಬೀತುಮಾಡಿದ. ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದ, ಅಲ್ವಿನ್ ಹೆನ್‍ಸನ್, ಪೆರ್‍ಶೋಫ್, ವಾರಿಜ್, ಸ್ಯಾಮ್ಯುಯಲ್‍ಸನ್, ಕಾಲ್ಡರ್, ವಾಲ್ಟರ್ ಸಾಲಂಟ್‍ರವರ ಸಂಶೋಧನೆಗೆ ಪೂರಕವಾಯಿತು.

	ಇವನ ಎ ಸ್ಟಡೀ ಇನ್ ದಿ ಥಿಯರಿ ಆಫ್ ಎಕನಾಮಿಕ್ ಇವಲ್ಯೂಷನ್ ಎಂಬ ಗ್ರಂಥ 1954ರಲ್ಲಿ ಪ್ರಕಟವಾಯಿತು. ಈ ಗ್ರಂಥದಲ್ಲಿ ಅಂತಾರಾಷ್ಟ್ರೀಯ ಸ್ತರದಲ್ಲಿ ಉಂಟಾಗಿರುವ ಅರ್ಥಿಕ ಅಸಮಾನತೆಗಳ ಅರ್ಥಮಾಡಿಕೊಳ್ಳಲು ವಿಶ್ಲೇಷಣಾತ್ಮಕ ಅರ್ಥಶಾಸ್ತ್ರವನ್ನು ಹೇಗೆ ಬಳಸಬಹುದೆಂಬುದನ್ನು ವ್ಯಾಪಕವಾಗಿ ಚರ್ಚಿಸಿದ್ದಾನೆ. ಈ ಚರ್ಚೆಯಲ್ಲಿ ರಾಷ್ಟ್ರಗಳ ಜನಸಂಖ್ಯೆ, ವಿದ್ಯಾಭ್ಯಾಸ, ವಲಸೆ ಹೋಗುವಿಕೆ ಮುಂತಾದವು ಅಂತಾರಾಷ್ಟ್ರೀಯ ಅಸಮಾನತೆಗಳ ಮೇಲೆ ಹೇಗೆ ಪ್ರಭಾವಬೀರುತ್ತವೆ ಎನ್ನುವುದರ ಬಗ್ಗೆ ಅನೇಕ ಸಿದ್ಧಾಂತಗಳನ್ನು ರೂಪಿಸಿದ್ದಾನೆ. ಇವನ ಇನ್ನೊಂದು ಗ್ರಂಥ ಎ ಸ್ಟಡೀ ಇನ್ ದಿ ಥಿಯರಿ ಆಫ್ ಇನ್‍ವೆಸ್ಟ್‍ಮೆಂಟ್ 1960ರಲ್ಲಿ ಪ್ರಕಟವಾಯಿತು. ಇದರಲ್ಲಿ ಹೂಡಿಕೆಯ ಬಗ್ಗೆ ಅತ್ಯಂತ ವಿನೂತನವಾದ ಸಿದ್ಧಾಂತವನ್ನು ಪ್ರಕಟಿಸಿದ. ಹೂಡಿಕೆ ಮತ್ತು ಅರ್ಥಿಕ ನಡವಳಿಕೆಗಳ ನಡುವಣ ಸಂಬಂಧದ ಶೋಧ ಈ ಕೃತಿಯ ವೈಶಿಷ್ಟ್ಯ. ಉತ್ಪಾದಕತೆ ಮತ್ತು ಹೂಡಿಕೆಯನ್ನು, ಅನೇಕ ವಿಷಯಗಳ ಬಗೆಗಿನ ತಿಳುವಳಿಕೆ ಹೇಗೆ ಪ್ರಚೋದಿಸುತ್ತದೆ ಎನ್ನುವುದನ್ನು ಸಹ ಈ ಗ್ರಂಥದಲ್ಲಿ ಪ್ರಸ್ತಾಪಿಸಲಾಗಿದೆ. ಮುಂದೆ ಈ ವಿಷಯಗಳ ಬಗ್ಗೆ ವ್ಯಾಪಕ ಸಂಶೋಧನೆ ನಡೆಯುವುದಕ್ಕೆ ಈ ಕೃತಿ ತುಂಬ ಸಹಾಯವಾಯಿತು.

	ಈತ ಮೂಲಭೂತವಾಗಿ ಗಣಿತೀಯ ಅರ್ಥವಿಜ್ಞಾನದಲ್ಲಿ ಸಂಶೋಧನೆ ನಡೆಸಿದ್ದರೂ ಆ ಕ್ಷೇತ್ರಕ್ಕಿರುವ ಮಿತಿಗಳನ್ನೂ ಸ್ಪಷ್ಟವಾಗಿ ಗುರುತಿಸಿದ. ಗಣಿತೀಯ ಸೂಕ್ತಿಗಳನ್ನು ವ್ಯಾಪಕವಾಗಿ ಬಳಸಿ, ಅರ್ಥಿಕ ಮಾದರಿಗಳನ್ನು ಅರ್ಥಹೀನ ಮಾಡುವುದರ ವಿರುದ್ಧ ದನಿ ಎತ್ತಿದ. ಅರ್ಥಿಕ ತತ್ತ್ವಗಳ ಸತ್ಯಾಸತ್ಯತೆಗಳ ವೈಜ್ಞಾನಿಕ ವಿಶ್ಲೇಷಣೆಗೆ ಮಾತ್ರ ಗಣಿತೋಕ್ತಿ ಅರ್ಥಶಾಸ್ತ್ರವನ್ನು ಬಳಸಬೇಕೆಂದು ಒತ್ತಿ ಹೇಳಿದ.

	ಈತನ ಸಂಶೋಧನೆಗಳು ಮುಖ್ಯವಾಗಿ ಅರ್ಥಿಕ ಸಂಶೋಧನೆಗಳಿಗೆ ಮೂಲ ಕೊಡುಗೆಗಳಾಗಿರುವುದರಿಂದ ಮತ್ತು ಹೊಸ ಹೊಸ ದಿಕ್ಕುಗಳನ್ನು ಸಂಶೋಧನೆಗೆ ತೆರೆದಿರುವುದರಿಂದ ಪ್ರಪಂಚಮಾನ್ಯವಾಗಿವೆ. ಈ ಸಂಶೋಧನೆ ಗಳ ಅನಂತರ ಗಣಿತೀಯ ಅರ್ಥವಿಜ್ಞಾನದಲ್ಲಿ, ಸಮತೋಲನ ಬಜೆಟ್ ಸಿದ್ಧಾಂತದಲ್ಲಿ, ಬಂಡವಾಳ ಮತ್ತು ಹೂಡಿಕೆಗಳ ಸಿದ್ಧಾಂತಗಳಲ್ಲಿ ಅನೇಕ ಬೆಳೆವಣಿಗಳು ನಡೆದಿವೆ. ಇವನ ಕೆಲವು ಸಿದ್ಧಾಂತಗಳು ತೀವ್ರ ಟೀಕೆಗಳಿಗೆ ಗುರಿಯಾಗಿದ್ದರೂ ಸಂಶೋಧನೆಯ ಹೊಸತನಗಳು ಅರ್ಥಿಕ ಚಿಂತನೆಯ ಇತಿಹಾಸದಲ್ಲಿ ಈತನಿಗೆ ಗಟ್ಟಿಯಾದ ಸ್ಥಾನವನ್ನು ದೊರಕಿಸಿಕೊಟ್ಟಿವೆ.		
	
			(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ